
ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ನೋಡಿದರೆ ನಮಗೆ ಕಾಣಿಸುವುದು ಸಾಮರಸ್ಯದ ಭಾವ. ವಿವಿಧ ಧರ್ಮಗಳ ಅನೋನ್ಯ ಸಂಪರ್ಕ. ಸಮಭಾವ ಮತ್ತು ಮನುಷ್ಯ ಜಾತಿ ತಾನೊಂದೆ ಎನ್ನುವ ಐಕ್ಯತೆಯ ದೃಷ್ಟಿ ಇಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರತಿಪಾದಿಸಿದರು. ಅವರು ವಿಧಾನ ಸೌಧದ ಆವರಣದಲ್ಲಿ ಏರ್ಪಾಟಾಗಿದ್ದ ಪುಸ್ತಕ ಮೇಳದ ಸಂದರ್ಭದಲ್ಲಿ 2.03.2025ರಂದು ಅಯೋಜಿತವಾಗಿದ್ದ ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು’ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಾನು ಮುಷ್ತಾಕ್ ಮತ್ತು ಡಾ.ಡಿ.ಡೊಮೆನಿಕ್ ಅವರ ಜೊತೆಗೆ ಸಹಭಾಷಣಕಾರರಾಗಿದ್ದರು.
ಬೂಕರ್ ಪ್ರಶಸ್ತಿಯ ಪ್ರಧಾನ ಸುತ್ತಿಗೆ ಬಾನುಮುಷ್ತಾಕ್ ಅವರ ಕೃತಿ ಪ್ರವೇಶಿಸಿರುವುದರ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ ನಾಡೋಜ ಡಾ.ಮಹೇಶ ಜೋಶಿಯವರು ರಂಜಾನ್ ನ ಪವಿತ್ರ ತಿಂಗಳಿನಲ್ಲಿ ಅವರಿಂದ ಕನ್ನಡಕ್ಕೆ ಶುಭ ಸುದ್ದಿ ದೊರಕಲಿ ಎಂದು ಆಶಿಸಿದರು. ‘ಸಾಮರಸ್ಯದ ಭಾವ ಕನ್ನಡದ ಜೀವ’ ಎನ್ನುವುದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿಯೇ ಅಳವಡಿಕೆಯಾಗಿತ್ತು ಎಂಬುದನ್ನು ನೆನಪು ಮಾಡಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರ ಭಾವೈಕ್ಯತೆ ಭಾವವನ್ನು ಕನ್ನಡ ಸಾಹಿತ್ಯದಲ್ಲಿ
ಪಂಪನು ಕನ್ನಡದ ಆದಿಕವಿ. ಸಮಾನತೆಯ ಭಾವವು ಅವನ ಕಾವ್ಯದಲ್ಲಿಯೇ ಆರಂಭವಾಯಿತು. ಇದು ವೃಕ್ಷದಂತೆ ಇಡೀ ಕನ್ನಡ ಸಾಹಿತ್ಯ ಪರಂಪರೆಯನ್ನು ಪ್ರಭಾವಿಸಿತು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕರ್ಣನ ಬಾಯಲ್ಲಂತೂ ಪಂಪ ಕುಲದ ಹೆಗ್ಗಳಿಕೆಯನ್ನು ಜಾಡಿಸಿದ್ದಾನೆ. ʼಕುಲಂ ಕುಲಂ ಅಲ್ತು ಚಲಂ ಕುಲಂʼ ಎಂದು ಖಚಿತವಾಗಿ ಹೇಳುತ್ತಾನೆ. ಅವನ ಶ್ರೀ ಕೃಷ್ಣ ಸರ್ವರಲ್ಲಿ ಸಮಾನತೆಯನ್ನು ಸಾರುವ ಧೀರೋದಾತ್ತ ಮೂರ್ತಿ. ʼಪಂಪನು ಕೇವಲ ಕವಿ ಮಾತ್ರವಲ್ಲ ಸಮಾನತೆಯ ಸಂದೇಶವನ್ನು ಸಾರಿದ ರಾಷ್ಟ್ರೀಯ ಪುರುಷʼ ಎಂದು ಮುಳಿಯ ತಿಮ್ಮಪ್ಪಯ್ಯನವರು ಹೇಳಿದ ಮಾತು ಇಲ್ಲಿ ಗಮನಾರ್ಹವಾಗಿದೆ ಎಂದು ಹೇಳಿ ಜೈನರು ಭಾವೈಕ್ಯತೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಕೊಂಡರು.
ಕನ್ನಡ ಸಾಹಿತ್ಯದಲ್ಲಿ ಸಮನತೆಯ ಮೇರು ಶಿಖರಗಳೆಂದರೆ ವಚನಗಳು. ʼಇವರು ನಮ್ಮ ನಾಡಿನ ರಸಋಷಿಗಳು, ಅವರ ಚಿಂತನೆಗಳ ಸಾಹಿತ್ಯ ದರ್ಶನವೇ ವಚನಗಳುʼ ಎಂದು ತಮ್ಮ ʼವಚನ ಧರ್ಮಸಾರʼದಲ್ಲಿ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಹೇಳಿರುವುದನ್ನು ನಾಡೋಜ ಡಾ.ಮಹೇಶ ಜೋಶಿ ನೆನಪು ಮಾಡಿಕೊಂಡು ವಚನಗಳಲ್ಲಿ ನಾವು ಅಂತರಂಗದ ನಿರೀಕ್ಷೆಯ ಜೊತೆಗೆ ಸಮಾಜದ ಡೊಂಕುಗಳನ್ನು ತಿದ್ದುವ ಮನೋಭಾವವನ್ನೂ ಕಾಣ ಬಹುದು. ಸಮಾನತೆಯ ನೀತಿಗಳು ವಚನಗಳಲ್ಲಿ ಮತ್ತೆ ಮತ್ತೆ ಕಾಣಿಸುತ್ತವೆ. ಇಡೀ ಪರಂಪರೆಯೇ ಸಮಾನತೆಯ ಕನಸನ್ನು ಕಂಡು ಬಹುದೊಡ್ಡ ಹೆದ್ದಾರಿಯನ್ನು ಕನ್ನಡ ಸಾಹಿತ್ಯಕ್ಕೆ ನಿರ್ಮಿಸಿತು ಎಂದರು.
ದಾಸ ವಾಜ್ಞಯವು ಹಾಡಿನ ರೂಪದಲ್ಲಿ ಸಮಾನತೆಯ ಭಾವವನ್ನು ಜನರಿಗೆ ತಲುಪಿಸಿತು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಅನೇಕ ಪುರಾಣದ ಕಥೆಗಳ ಮೂಲಕವೇ ಬದುಕಿನ ಸತ್ಯವನ್ನು ಇಲ್ಲಿ ವಿವರಿಸಲಾಯಿತು. ಸಮಾಜಬೋಧನೆ ಪುರುಂದರ ದಾಸರ ಕೀರ್ತನೆಗಳಲ್ಲಿ ಮುಖ್ಯವಾದ ಸಂಗತಿ. ‘ಕುಲದ ಮೇಲೆ ಹೋಗ ಬೇಡ ಕುಲವಿಲ್ಲ ಜ್ಞಾನಿಗೆʼ ಎಂದು ಅವರು ಖಚಿತವಾಗಿ ನುಡಿದಿದ್ದಾರೆ. ಕನಕದಾಸರು ಕೇವಲ ಕೀರ್ತನೆಕಾರರು ಮಾತ್ರವಲ್ಲ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆಯಂತಹ ಕಾವ್ಯಗಳನ್ನೂ ಬರೆದವರು ಹರಿಹರ ಬೇಧವ ಅಳಿಸುವಂತೆ ಖಚಿತ ನಿಲುವನ್ನು ತಳೆದವರು ಎಂದು ವಿಶ್ಲೇಷಿಸಿದರು.
ನಾಡೋಜ ಡಾ.ಮಹೇಶ ಜೋಶಿಯವರು ಮೂರು ಘಟನೆಗಳನ್ನು ಭಾವೈಕ್ಯತೆಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಉಲ್ಲೇಖಿಸಿದರು. ಸರ್ವಜ್ಞ ತ್ರಿಪದಿ ಸಂಪಾದಕರಾದ ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರಿಗೂ ಮತ್ತು ದೇವುಡು ಅವರಿಗೂ ತುಂಬಾ ಆತ್ಮೀಯತೆ ಇತ್ತು. ಒಮ್ಮೆ ದೇವುಡು ಉತ್ತಂಗಿ ಚೆನ್ನಪ್ಪನವರನ್ನು ಮನೆಗೆ ಊಟಕ್ಕೆ ಬರಲು ಆಹ್ವಾನಿಸಿದರು. ಅದಕ್ಕೆ ಉತ್ತಂಗಿಯವರು ಸಮ್ಮತಿಸಿದರು.ತಮ್ಮ ಗುರುಗಳಾದ ವೈದ್ಯನಾಥ ಶಾಸ್ತ್ರಿಗಳನ್ನು ವಿಚಾರಿಸಿದರು. ಅವರು ನಿನ್ನ ಮನೆಗೆ ವಾಸುದೇವನೇ ಬಂದರೆ ಹೇಗೆ ಸತ್ಕರಿಸುತ್ತೀಯೋ ಹಾಗೆಯೇ ಸತ್ಕರಿಸು ಎಂದರು. ದೇವುಡು ಅವರಿಗೆ ಸಮಾದಾನ ಸಂತೋಷಗಳೆರಡೂ ಆದವು.ಮಾರನೇ ದಿನ ಉತ್ತಂಗಿ ಚೆನ್ನಪ್ಪನವರು ದೇವುಡು ಮನೆಗೆ ಬಂದರು. ದೇವುಡು ಸಪತ್ನಿಕರಾಗಿ ಉತ್ತಂಗಿ ಚೆನ್ನಪ್ಪನವರ ಪಾದ ತೊಳೆದು ಪಾದೋದಕವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ನಂತರ ಅವರನ್ನು ಕುಳ್ಳಿರಿಸಿ ಸಂಭಾಷಿಸುತ್ತಾ ಸಹಪಂಕ್ತಿ ಭೋಜನ ಮಾಡಿದರು. ಅದರಂತೆ ಶರೀಫರು ಮತ್ತು ಗೋವಿಂದ ಭಟ್ಟರ ಒಡನಾಟದ ಘಟನೆಯನ್ನು ವಿವರಿಸಿ, ವರಕವಿ ಬೇಂದ್ರೆಯವರು ತಮ್ಮ ಚಪ್ಪಲಿ ಹೊಲೆಯುತ್ತಿದ್ದ ಚಮ್ಮಾರನಿಗೆ ನೆರಳಾಗಿ ತಮ್ಮ ಕೊಡೆಯನ್ನು ಹಿಡಿದ ಘಟನೆಯನ್ನು ಹೇಳಿ ಸಮಾನತೆ ಎನ್ನುವುದು ಮನಸ್ಸಿನಲ್ಲಿ ಇರ ಬೇಕು ಆಗ ಅದು ಕೃತಿಯಲ್ಲಿಯೂ ಬರುತ್ತದೆ ಎಂದು ಒತ್ತಿ ಹೇಳಿ ‘ಸಾಮರಸ್ಯದ ಭಾವ’ ವಿಶ್ವಭಾರತಿಗೆ ಕನ್ನಡದಾರತಿ ಎಂದು ರೂಪಕಾತ್ಮಕವಾಗಿ ತಮ್ಮ ಪ್ರತಿಪಾದನೆಯ ಸಾರವನ್ನು ಹಿಡಿದಿಟ್ಟರು.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
Publisher: ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು