
ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ಹೆಚ್.ಕೆ.ಮರಿಯಪ್ಪ ದತ್ತಿ ಪ್ರಶಸ್ತಿ’ಗೆ ಡಾ.ಸೀಮಾ ರಾಣಿ ಆಯ್ಕೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ಹೆಚ್.ಕೆ.ಮರಿಯಪ್ಪ ದತ್ತಿ ಪ್ರಶಸ್ತಿ’ಗೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ.ಸೀಮಾ ರಾಣಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಅಪ್ರತಿಮ ಕ್ರಿಯಾಶೀಲತೆ ಮತ್ತು ದಕ್ಷತೆಯಿಂದ ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಡಾ.ಎಚ್.ಕೆ.ಮರಿಯಪ್ಪನವರು ತಮ್ಮ ಮಡದಿ ಡಾ. ಶಾಂತಾ ಅವರ ಜೊತೆಗೂಡಿ ಅರವತ್ತು ವರ್ಷಗಳು ಅಮೆರಿಕಾದಲ್ಲಿ ನೆಲೆ ನಿಂತು ಅಪಾರ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಕನ್ನಡದ ಕಂಪನ್ನು ಸದಾ ತಮ್ಮೊಂದಿಗೆ ಉಳಿಸಿಕೊಂಡು ಬಂದವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿಯೊಂದನ್ನು ಸ್ಥಾಪಿಸಿ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದವನರನ್ನು ಪರಿಗಣಿಸಲು ಸೂಚಿಸಿರುತ್ತಾರೆ.
ಇದರಂತೆ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕಶವಾಗಿ ಪರಿಶೀಲಿಸಿ ಸ್ತ್ರೀ ಮತ್ತು ಪ್ರಸೂತಿ ತಜ್ಞರು ಮತ್ತು ಯೋಗ ಕ್ಷೇತ್ರದಲ್ಲಿಯೂ ಪರಿಣಿತರೂ ಆಗಿರುವ ಡಾ.ಸೀಮಾ ರಾಣಿಯವರನ್ನು ಆಯ್ಕೆ ಮಾಡಿದೆ. ಡಾ.ಸೀಮಾ ರಾಣಿಯವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದರ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದನ್ನೂ ಪರಿಶೀಲನಾ ಸಮಿತಿ ಗಮನಿಸಿದೆ. ಕರೋನಾದ ಸಂದರ್ಭದಲ್ಲಿ ಅವರು ಸಲ್ಲಿಸಿದ ಮಹತ್ವದ ಸೇವೆಯನ್ನು ವಿಶೇಷವಾಗಿ ಪರಿಗಣಿಸಲಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು , ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ದತ್ತಿದಾನಿಗಳ ಪರವಾಗಿ ಡಾ.ಹರಿಶ್ ಗೌಡ ಹಾಜರಿದ್ದರು. ಇದೇ ತಿಂಗಳ 13ರ ಗುರುವಾರ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದು, ಉಳಿದ ವಿವರಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು
Publisher: ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು