ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು

ವೈದ್ಯರು ಸಮಾಜದ ಸಂರಕ್ಷಕರು: ನಾಡೋಜ ಡಾ.ಮಹೇಶ ಜೋಶಿ

13 Mar, 2025

ಬೆಂಗಳೂರು: ಇಂದಿನ ದಿನಗಳಲ್ಲಿ ಶಾಲಾ-ಕಚೇರಿಗಳಿಗೆ ಹೋಗದೆ ಇರುವವರು ಇರಬಹುದು ಆದರೆ ವೈದ್ಯರ ಬಳಿ ಹೋಗದೆ ಇರುವವರು ಯಾರೂ ಇಲ್ಲ. ವೈದ್ಯರು ಮತ್ತು ಶಿಕ್ಷಕರು ಸಮಾಜದ ಎರಡು ಕಣ್ಣುಗಳ ಹಾಗೆ ಅವರಿಬ್ಬರ ಸೇವೆಯಿಂದಲೇ ಸಮಾಜದ ಸ್ವಸ್ಥ್ಯ ಉಳಿಯುವುದು ಸಾಧ್ಯ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ 2025ನೆಯ ಸಾಲಿನ   ‘ಡಾ.ಹೆಚ್.ಕೆ.ಮರಿಯಪ್ಪ ದತ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವೈವಿಧ್ಯಮಯವಾದ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ದತ್ತಿಗಳಿವೆ. ಆದರೆ ವೈದ್ಯರಿಂದ ವೈದ್ಯರಿಗೆ ನೀಡಲ್ಪಡುವ ಪ್ರಥಮ ದತ್ತಿ ಇದಾಗಿದೆ ಎಂದು ಹೇಳಿದ ಅವರು ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಎಲ್ಲಾ ಕ್ಷೇತ್ರದವರು ಇಟ್ಟಿರುವ ನಂಬಿಕೆ ಮತ್ತು ಇದು ಕನ್ನಡಿಗರ ಮಾತೃಸಂಸ್ಥೆ ಎನ್ನುವ ಭಾವ ಎರಡೂ ರುಜುವಾತಾಗಿದೆ ಎಂದು ಹೇಳಿದರು.   

ಆಸ್ಪತ್ರೆಗಳಲ್ಲಿ ಕಾಣುವ ನೋವು, ಗದ್ದಲಗಳ ಮಧ್ಯದಲ್ಲಿ, ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆಗಳಲ್ಲಿ ವೈದ್ಯರು  ತೋರಿಸುವ ಸಂಯಮ, ಪ್ರೀತಿ  ಕಂಡು ಅಚ್ಚರಿಯಾಗುತ್ತದೆ. ನನ್ನ ಜೀವನದಲ್ಲಿ  ಅಸಾಮಾನ್ಯ ಸದ್ಗುಣಗಳ ವೈದ್ಯರು ಗಳನ್ನು ಮೂಕ ವಿಸ್ಮಿತನಾಗಿದ್ದೇನೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಡಾ.ರಾಶಿ, ಡಾ.ಅನುಪಮ ನಿರಂಜನ, ಡಾ.ದೊಡ್ಡೇರಿ ವೆಂಕಟಗಿರಿ ರಾವ್ ಅವರಂತಹ ವೈದ್ಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ವಿಶೇಷವಾಗಿ ಪ್ರಸ್ತಾಪಿಸಿ ಅಪ್ರತಿಮ ಕ್ರಿಯಾಶೀಲತೆ ಮತ್ತು ದಕ್ಷತೆಯಿಂದ ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಡಾ.ಎಚ್.ಕೆ.ಮರಿಯಪ್ಪನವರು  ತಮ್ಮ ಮಡದಿ ಡಾ. ಶಾಂತಾ ಅವರ ಜೊತೆಗೂಡಿ ಅರವತ್ತು ವರ್ಷಗಳು  ಅಮೆರಿಕಾದಲ್ಲಿ ನೆಲೆ ನಿಂತು ಅಪಾರ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಕನ್ನಡದ ಕಂಪನ್ನು ಸದಾ ತಮ್ಮೊಂದಿಗೆ ಉಳಿಸಿಕೊಂಡು ಬಂದವರು ಅವರು ಸ್ಥಾಪಿಸಿರುವ ಈ ದತ್ತಿ ಹೊಸ ಸಾಧ್ಯತೆಯೊಂದರ ಅನಾವರಣವೂ ಆಗಿದೆ ಎಂದರು. 
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ   ಕರ್ನಾಟಕ ರಾಜ್ಯ ಪೋಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಅವರು ಗೌರವಕ್ಕೆ ಅರ್ಹರಾದವರನ್ನು ಹುಡುಕಿ ಗೌರವಿಸಿದಾಗ ಗೌರವದ ಬೆಲೆ ಹೆಚ್ಚಾಗುತ್ತದೆ. ಸಮಾಜದಲ್ಲಿಯೂ ಸಾಧನೆಗೆ ಮನ್ನಣೆ ಇದೆ ಎಂಬ ಧನಾತ್ಮಕ ಭಾವ ಮೂಡುತ್ತದೆ ಎಂದು ಹೇಳಿ ಕನ್ನಡ ಸಾಹಿತ್ಯ ಪರಿಷತ್ತು ಹೊಂದಿರುವ ಶಿಸ್ತು ಮತ್ತು ಸಂಯಮ ಮಾದರಿಯಾಗಿದ್ದು ಇದನ್ನು ರೂಪಿಸಿದವರಿಗೆ ಕೋಟಿ ನಮನಗಳು ಎಂದರು. 

ಬ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ನರಶಾಸ್ತ್ರಜ್ಞರಾಗಿರುವ ಡಾ.ಎನ್.ಕೆ.ವೆಂಕಟರಮಣ ಅವರು ಪ್ರಶಸ್ತಿ ಪ್ರದಾನ ಮಾಡಿ  ನಾಡೋಜ ಡಾ.ಮಹೇಶ ಜೋಶಿಯವರು ಯಾವುದೇ ಸ್ಥಾನದಲ್ಲಿದ್ದರೂ ಅದಕ್ಕೆ ಗೌರವವನ್ನು ತರುವಂತಹವರು ಕಾಲದ ಪರಿವೆಯೇ ಇಲ್ಲದೆ ಕೆಲಸ ಮಾಡುವ ಅವರದು ‘ಮಾದರಿ ವ್ಯಕ್ತಿತ್ವ’ಎಂದು ಹೇಳಿ. ವೈದ್ಯಕೀಯ ಕ್ಷೇತ್ರವೇ ಮಾನವೀಯತೆಯನ್ನು ಉಳಿಸಿ ಬೆಳೆಸುವ ಗುರಿಯನ್ನು ಹೊಂದಿರುವಂತಹದು. ಇಂತಹ ಕ್ಷೇತ್ರದಲ್ಲಿರುವವರನ್ನು ಸನ್ಮಾನಿಸುವುದು ಉತ್ತಮ ಬೆಳವಣಿಗೆ ಎಂದರು. 

ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಗೆ ಪುರಸ್ಕಾರವನ್ನು ಪಡೆದ ಡಾ.ಸೀಮಾ ರಾಣಿ ತಮ್ಮ  ಮನದಾಳದ ಮಾತುಗಳನ್ನು ಹಂಚಿ ಕೊಂಡರೆ ದತ್ತಿ ದಾನಿಗಳ ಪರವಾಗಿ ಹಾಜರಿದ್ದ ಬಿ.ಟಿ.ಜಯಮುದ್ದಪ್ಪನವರು ಡಾ.ಎಚ್.ಕೆ.ಮರಿಯಪ್ಪನವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಬಣ್ಣಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿಯವರು ಸ್ವಾಗತವನ್ನು ಕೋರಿ, ಡಾ.ಪದ್ಮಿನಿ ನಾಗರಾಜು ಅವರು ವಂದನೆಗಳನ್ನು ಅರ್ಪಿಸಿದರು. ಅಪಾರ ಸಂಖ್ಯೆ ಕನ್ನಡಾಭಿಮಾನಿಗಳು, ಡಾ.ಎಚ್.ಕೆ.ಮರಿಯಪ್ಪ ಕುಟುಂಬ ವರ್ಗದವರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


 
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

Publisher: ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು

Login to Give your comment
Powered by