ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು

ಹಾವೇರಿಯಲ್ಲಿ ನಡೆಯುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯ ವಿಶೇಷಗಳು

31 Dec, 2022

ಬೆಂಗಳೂರು : ಹಾವೇರಿಯಲ್ಲಿ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜನವರಿ ೬, ೭ ಮತ್ತು ೮ರಂದು ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಹಿರಿಯ ಕವಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದರ ಆಹ್ವಾನ ಪತ್ರಿಕೆಯನ್ನು ಡಿಸೆಂಬರ್ ೨೪ರಂದು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದ್ದಾರೆ. ಈ ಆಹ್ವಾನ ಪತ್ರಿಕೆಯು ಕೆಳ ಕಂಡ ವೈಶಿಷ್ಟ್ಯಗಳನ್ನು ಹೊಂದಿದ್ದು ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಿನಂತಿಸಿ ಕೊಂಡಿದ್ದಾರೆ.


ಆಹ್ವಾನ ಪತ್ರಿಕೆ ನೋಡಲು/ಡೌನ್ ಲೋಡ್ ಮಾಡಲು ಇಲ್ಲಿ ಒತ್ತಿ 

೧. ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಸಲ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾತೃಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಗಳನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಲಾಗಿದೆ.

೨. ಕನ್ನಡ ತಾಯಿಯ ಭುವನೇಶ್ವರಿಯ ಚಿತ್ರವು ಮುಖಪುಟದಲ್ಲಿದ್ದು ಕನ್ನಡ ಬಾವುಟದ ಜೊತೆಯಲ್ಲಿ ಭಕ್ತಿ ಭಾವ ಮೂಡಿ ಬರುವ ಭಂಗಿಯ ಈ ಚಿತ್ರವು ಆಹ್ವಾನ ಪತ್ರಿಕೆಯ ವಿಶೇಷತೆಯನ್ನು ಹೆಚ್ಚು ಮಾಡಿದೆ.

೩. ಆಹ್ವಾನ ಪತ್ರಿಕೆಯ ಮುಖಪುಟದಲ್ಲಿಯೇ ‘‘ಇದು ಕನ್ನಡಿಗರೆಲ್ಲರ ಹಬ್ಬ ಎಲ್ಲಾ ಕನ್ನಡಿಗರೂ ಸಮಾನರು” ಎನ್ನುವ ವಾಕ್ಯವಿದ್ದು, ಇದು ಜಾತಿ ಧರ್ಮಗಳನ್ನು ಮೀರಿದ ಕನ್ನಡದ ಹಬ್ಬ ಎನ್ನುವುದನ್ನು ಸಾಕ್ಷೀಕರಿಸಿ ಕನ್ನಡವನ್ನು ಹೊರತು ಪಡಿಸಿದ ಯಾವುದೇ ಶಿಷ್ಟಾಚಾರಕ್ಕೂ ಸಮ್ಮೆಳನದಲ್ಲಿ ಮಹತ್ವವಿಲ್ಲ ಎನ್ನುವುದನ್ನು ಸೂಚಿಸಿದೆ.

೪. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮಹತ್ವ ನೀಡಿ ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ಮುಗಿಸುವ ಸ್ಪಷ್ಟ ಆಶಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದ್ದು ಇದೇ ಮೊದಲ ಸಲ ಪ್ರತಿಯೊಬ್ಬರೂ ಮಾತನಾಡುವ ಸಮಯವನ್ನು ಸೂಚಿಸಲಾಗಿದ್ದು ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತದೆ.

೫. ಇಡೀ ಆಹ್ವಾನ ಪತ್ರಿಕೆಯ ವಿನ್ಯಾಸವು ಕನ್ನಡದ ಧ್ವಜದ ನೆನಪನ್ನು ತರುವಂತಿದ್ದು, ಇದರ ಸ್ವರೂಪವೇ ಕನ್ನಡಮಯವಾಗಿದೆ.

೬. ಇದೇ ಮೊಟ್ಟ ಮೊದಲ ಸಲ ಪ್ರಧಾನ ವೇದಿಕೆಗೆ ‘ಕನಕ-ಶರೀಫ-ಸರ್ವಜ್ಞ’ ಮೂವರ ಹೆಸರನ್ನು ಇಡಲಾಗಿದ್ದು “ಸಾಮರಸ್ಯದ ಭಾವ-ಕನ್ನಡದ ಜೀವ” ಎನ್ನುವ ಧ್ಯೇಯ ವಾಕ್ಯವನ್ನೂ ನೀಡಲಾಗಿದೆ. ಇದು ಸಮ್ಮೇಳನ ಹೊಂದಿರುವ ಉನ್ನತ ಆಶಯದ ದ್ಯೋತಕವಾಗಿದೆ.

೭. ಪ್ರಧಾನ ವೇದಿಕೆ ಎನ್ನುವ ಪರಿಕಲ್ಪನೆಯನ್ನು ಮೀರಿ ಇದೇ ಮೊದಲ ಸಲ ಮೂರು ಸಮಾನ ವೇದಿಕೆಗಳನ್ನು ರೂಪಿಸಲಾಗಿದೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಇದೇ ಮೊದಲ ಸಲ ೩೨ ಗೋಷ್ಠ್ಠಿಗಳು ಏರ್ಪಾಟಾಗಿದ್ದು ಒಟ್ಟು ೧೫೪ ಗಣ್ಯರು ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ದಾಖಲೆಯಾಗಿದ್ದು ಹಿಂದಿನ ಸಮ್ಮೇಳನಗಳಲ್ಲಿ ಇದ್ದ ಗೋಷ್ಠಿ ಮತ್ತು ಭಾಗವಹಿಸಿದವರ ಗಣ್ಯರ ಪಟ್ಟಿ ನೋಡಿದರೆ ಇದರ ಮಹತ್ವ ಅರಿವಾಗುತ್ತದೆ.

ಸ್ಥಳ   ಒಟ್ಟು ಗೋಷ್ಠಿಗಳು ಭಾಗವಹಿಸಿದವರು
ಕಲಬುರಗಿ ೨೧   ೯೪
ಧಾರವಾಡ ೨೨ ೮೯
ಮೈಸೂರು ೨೦  ೧೧೦
ರಾಯಚೂರು ೧೭  ೯೫
ಶ್ರವಣಬೆಳಗೊಳ ೧೪  ೫೫
ಗಂಗಾವತಿ ೧೨ ೫೯

                         

೮. ಕವಿಗೋಷ್ಠಿಗಳಲ್ಲಿ ಹಿರಿಯ ಕವಿಗಳನ್ನು ವಿಶೇಷ ಆಹ್ವಾನಿಸಿ ಹೊಸ ಪೀಳಿಗೆಯ ಕವಿ, ಕವಯತ್ರಿಯರಿಗೆ ಆದ್ಯತೆ ನೀಡಲಾಗಿದೆ. ಇದು ಹೊಸ ಪೀಳಿಗೆಯ ಅಭಿವ್ಯಕ್ತಿಗೆ ಕನ್ನಡ ಸಾಹಿತ್ಯ ಪರಿಷತ್ ನೀಡುವ ಮಹತ್ವವನ್ನು ಸೂಚಿಸುತ್ತದೆ. ಕರ್ನಾಟಕದ ೩೧ ಜಿಲ್ಲೆಗಳಿಗೆ ಮಾತ್ರವಲ್ಲದೆ ಎಂಟು ಜನ ಹೊರ ನಾಡ ಕನ್ನಡಿಗರಿಗೂ ಕೂಡ ಕವನ ವಾಚಿಸುವ ಅವಕಾಶವನ್ನು ನೀಡಲಾಗಿದೆ. ಕನ್ನಡ ಸಾಹಿತ್ಯದ ಹೊಸ ಒಲವುಗಳು ಗೋಷ್ಠಿಯಲ್ಲಿ ಕೂಡ  ಯುವ ಬರಹಗಾರರ ತುಡಿತಗಳ ಕುರಿತು ಚರ್ಚೆ ನಡೆಯಲಿದೆ.

೯. ಗೋಷ್ಠಿಗಳಲ್ಲಿ ಈವರೆಗೂ ಚರ್ಚೆಯಾಗದ ವಿಷಯಗಳ ಕುರಿತು ಆದ್ಯತೆಯನ್ನು ನೀಡುರುವುದು ಮಹತ್ವದ ಸಂಗತಿಯಾಗಿದೆ.

ಅ. ಕನ್ನಡದಲ್ಲಿ ಕಾನೂನು ಸಾಹಿತ್ಯ ಎನ್ನುವ ವಿಶೇಷ ವಿಷಯದ ಕುರಿತು ಗೋಷ್ಠ್ಟಿ ಏರ್ಪಾಟಾಗಿದ್ದು ತಮ್ಮ ಕ್ಷೇತ್ರದಲ್ಲಿ ಕಟ್ಟುನಿಟ್ಟಾಗಿ ಕನ್ನಡವನ್ನು ಅನುಷ್ಠಾನಕ್ಕೆ ತಂದ ನ್ಯಾಯಾಧೀಶರು ಮತ್ತು ವಕೀಲರು ಇದೇ ಮೊದಲ ಸಲ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಕಾನೂನಾದರೆ ಜಿಲ್ಲಾ ನ್ಯಾಯಾಲಯ, ಅಧೀನ ವಿಚಾರಣಾ ನ್ಯಾಯಾಲಯಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ತೀರ್ಪು ಮತ್ತು ಆದೇಶಗಳನ್ನು ನೀಡಬೇಕಾದ್ದರಿಂದ ಈ ಗೋಷ್ಠಿ ಮಹತ್ವಪೂರ್ಣವಾಗಿದೆ.

ಆ. ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ‘ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ’ ಎನ್ನುವ ಗೋಷ್ಠಿ ರೂಪುಗೊಂಡಿದ್ದು ಇದು ಒಟ್ಟಾಗಿ ಕನ್ನಡ ಶಾಲೆಗಳು ಮತ್ತು ಕನ್ನಡ ಮಾಧ್ಯಮದ ಕುರಿತಾಗಿ ವಿಸ್ತೃತವಾದ ಚರ್ಚೆ ನಡೆಯಲಿದೆ.

ಇ. ಸಮ್ಮೇಳನಾಧ್ಯಕ್ಷರ ಜೊತೆಗಿನ ಮಾತು-ಮಂಥನದಲ್ಲಿ ಸಮಾಜದ ಎಲ್ಲಾ ಸ್ತರದವರಿಗೆ ಮಹತ್ವ ನೀಡಲಾಗಿದ್ದು, ಸಮ್ಮೇಳನಾಧ್ಯಕ್ಷರ ಸಾಧನೆಯ ಎಲ್ಲಾ ಮುಖಗಳನ್ನು ಈ ಮೂಲಕ ಅನಾವರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.

ಈ. ‘ಅನ್ನದಾತರ ಅಳಲು-ಅಪೇಕ್ಷೆಗಳು’ ಗೋಷ್ಠಿಯಲ್ಲಿ ಕೃಷಿಕರ ನೈಜ ಸ್ಥಿತಿಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳು ನೀಡ ಬಹುದಾದ ಕೊಡುಗೆಗಳ ಕುರಿತು ಚರ್ಚೆ ನಡೆಯಲಿದ್ದು, ಈ ಕ್ಷೇತ್ರದ ಎಲ್ಲಾ ನೆಲೆಗಳೂ ಇಲ್ಲಿ ಚರ್ಚಿತವಾಗಲಿವೆ.

ಉ. ‘ವರ್ತಮಾನದಲ್ಲಿ ಮಹಿಳೆ’ ಗೋಷ್ಠಿಯಲ್ಲಿ ಮಹಿಳೆಯರ ಸಾಹಿತ್ಯ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿನ ಸಾಧನೆಗಳ ಜೊತೆಗೆ ಗ್ರಾಮೀಣ ಮಹಿಳೆಯರ ಸಾಧನೆಗಳಿಗೂ ಕೂಡ ಮಹತ್ವ ನೀಡಲಾಗಿದೆ. ‘ಮಕ್ಕಳ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯದ ಜೊತೆಗೆ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸದ ಕುರಿತೂ ಚರ್ಚೆ ನಡೆಯುತ್ತಿರುವುದು ಮುಖ್ಯವಾಗಿದೆ.

ಊ. ‘ದಮನಿತರ ಲೋಕ’ದ ಸಬಲೀಕರಣಕ್ಕೆ ಮಹತ್ವ ನೀಡುವ ಗೋಷ್ಠಿ ಹೋರಾಟ ಮತ್ತು ಸಾಂಸ್ಕೃತಿಕ ದೃಷ್ಟಿ ಎರಡಕ್ಕೂ ಕೂಡ ಮಹತ್ವವನ್ನು ನೀಡಲಿದೆ. ‘ಕನ್ನಡ ಸಾಹಿತ್ಯದಲ್ಲಿನ ವಿಷಯ ವೈವಿಧ್ಯ’ ಕುರಿತ ಗೋಷ್ಠಿಯಲ್ಲಿ ಯಕ್ಷಗಾನ ಸಾಹಿತ್ಯ, ವೈದ್ಯ ಸಾಹಿತ್ಯ, ಚುಟುಕು ಸಾಹಿತ್ಯ, ಬಯಲಾಟ ಸಾಹಿತ್ಯದ ಕುರಿತೂ ಚರ್ಚೆಗಳು ನಡೆಯಲಿವೆ. ಸಂಕೀರ್ಣ ಗೋಷ್ಠಿಯಲ್ಲಿ ಗಮಕ ಕಲೆ, ಲಿಂಗತ್ವ ಅಲ್ಪಸಂಖ್ಯಾತರ ಭವಿಷ್ಯ, ಮೊಬೈಲ್ ಸಾಧಕ-ಬಾಧಕಗಳು, ಪೊಲೀಸ್ ಸಾಹಿತ್ಯ ಹೀಗೆ ವೈವಿಧ್ಯಮಯ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಕಲಾ ಸಂಗಮದಲ್ಲಿ ಶಿಲ್ಪಕಲೆ, ಸಂಗೀತ, ನೃತ್ಯ, ಬೀದಿ ನಾಟಕಗಳ ಕುರಿತು ಚರ್ಚೆ ನಡೆಯಲಿದ್ದು  ಇದು ಸಮ್ಮೇಳನಕ್ಕೆ ವಿಸ್ತಾರವನ್ನು ತಂದುಕೊಟ್ಟಿದೆ.

ಎ. ಜಿಲ್ಲಾ ದರ್ಶನದ ಗೋಷ್ಠಿಯಲ್ಲಿಯೂ ಕೂಡ ಚಾರಿತ್ರಿಕ ನೆಲೆಗಳ ವಿವಿಧ ಸ್ವರೂಪವನ್ನು ಚರ್ಚಿಸಲಾಗುತ್ತಿದೆ.

ಏ. ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಕುರಿತಾಗಿ ಕೂಡ ಒಂದು ವಿಶಿಷ್ಟ ಗೋಷ್ಠಿ ರೂಪುಗೊಂಡಿದ್ದು ಕರ್ನಾಟಕದ ಕೊಡುಗೆಗಳು ಇಲ್ಲಿ ಚರ್ಚಿತವಾಗಲಿವೆ.

ಐ. ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಕುರಿತಾಗಿಯೇ ಒಂದು ವಿಶಿಷ್ಟ ಗೋಷ್ಠಿ ರೂಪುಗೊಂಡಿದ್ದು ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ, ಮಹಾಜನ ವರದಿಗಳು ಇಲ್ಲಿ ಚರ್ಚಿತವಾಗಲಿವೆ. ವಿಜ್ಞಾನದ ಕುರಿತ ಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕನ್ನಡದ ಕುರಿತೂ ಚರ್ಚೆಗಳು ನಡೆಯಲಿದ್ದು ಹೊಸ ಆವಿಷ್ಕಾರಗಳ ಅಳವಡಿಕೆಯೂ ಚರ್ಚಿತವಾಗಲಿದೆ.

ಒ. ವಿದೇಶದಲ್ಲಿ ‘ಕನ್ನಡ ಡಿಂಡಿಮ’ ಗೋಷ್ಠಿಯಲ್ಲಿ ಅನಿವಾಸಿ ಕನ್ನಡಿಗರ ಆಶೋತ್ತರಗಳು ಬಿಂಬಿತವಾಗಲಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಸಲ ದುಬೈ, ಜರ್ಮನಿ, ಅಮೆರಿಕಗಳಿಂದಲೂ ಕನ್ನಡಿಗರು ಬಂದು ಪ್ರಬಂಧಗಳನ್ನು ಮಂಡಿಸುತ್ತಿರುವುದು ವಿಶೇಷ.

ಓ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡದ ಕುರಿತು ಇದೇ ಮೊದಲ ಸಲ ವಿಶೇಷ ಗೋಷ್ಠಿ ರೂಪುಗೊಂಡಿದ್ದು ಕನ್ನಡಿಗರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಕ್ಕುವ ಅವಕಾಶಗಳ ಕುರಿತು ಚರ್ಚೆ ನಡೆಯುವುದು ವಿಶೇಷ.

ಔ. ಕನ್ನಡದಲ್ಲಿ ಉಪ ಭಾಷೆಗಳು, ಸೋದರ ಭಾಷೆಗಳು ಸುಮಾರು ನಲವತ್ತು ಇರ ಬಹುದು ಎನ್ನುವುದು ಭಾಷಾ ಶಾಸ್ತçಜ್ಞರ ಅಭಿಮತ, ಇದರಲ್ಲಿ ಪ್ರಾತಿನಿಧಿಕವಾಗಿ ತುಳು, ಸೋಲಿಗ, ಕೊಂಕಣಿ, ಕೊಡವ, ಅರೆಭಾಷೆಗಳ ಬಾಂಧವ್ಯದ ಕುರಿತು ಚರ್ಚೆ ನಡೆಯಲಿದೆ.

೧೦. ಈ ಹಿಂದೆ ಸಮ್ಮೇಳನಾಧ್ಯಕ್ಷರಾದವರು ವಿಶೇಷ ಅತಿಥಿಗಳಾಗಿರುತ್ತಿದ್ದರು , ಅವರು ಪ್ರಬಂಧ ಮಂಡಿಸಿದ ಉದಾಹರಣೆಗಳಿಲ್ಲ, ಇದೇ ಮೊದಲ ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದ ಡಾ. ಎಸ್.ಎಲ್. ಭೈರಪ್ಪನವರು ವಿಶೇಷ ಉಪನ್ಯಾಸ ನೀಡುತ್ತಿದ್ದು, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಅವರ ಜೊತೆಗೆ ಈ ಗೋಷ್ಠಿಯಲ್ಲಿ ಇನ್ನೊಬ್ಬರು ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಶ್ರೀ ವೀರಪ್ಪ ಮೊಯಲಿಯವರೂ ಇರುತ್ತಿದ್ದು, ಇಬ್ಬರೂ ಸರಸ್ವತಿ ಸಮ್ಮಾನ ಪುರಸ್ಕೃತರ ಕುರಿತಾಗಿ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ.

೧೧. ೮೬ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ೮೬ ಜನ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದ್ದು ನಾಡಿನ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶದಿಂದ ಕೂಡ ಸಾಧಕರು ಬರುತ್ತಿರುವುದು ವಿಶೇಷ. ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಮಗ ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ, ಕನ್ನಡಕ್ಕೆ ಮೊದಲ ನಿಘಂಟು ನೀಡಿದ ಫರ್ಡಿನೆಂಡ್ ಕಿಟಲ್ ಅವರ ಮರಿ ಮೊಮ್ಮಗ ಯಾರ್ಕ್ ಕಿಟಲ್, ಮಾಲ್ಡಿವ್ ದೇಶದ ಗೌರವ ಕೌನ್ಸಿಲ್ ಜನರಲ್ ಡಾ. ವಿ.ಜಿ. ಜೋಸೆಪ್, ಜರ್ಮನಿ ನಗರಸಭಾ ಸದಸ್ಯರಾದ ವಿದುಷಿ ನಂದಿನಿ ನಾರಾಯಣ್, ಕತಾರ್ ದೇಶದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಹಿರಿಯ ಚಿತ್ರ ಕಲಾವಿದ ಶ್ರೀ ಬಿ.ಕೆ.ಎಸ್. ವರ್ಮ, ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಪ್ರತಿನಿಧಿ ಡಾ. ಕೆ.ಪಿ. ಅಶ್ವಿನಿ, ಹಿರಿಯ ಕಲಾವಿದ ಶ್ರೀ ವೈಜನಾಥ ಬಿರಾದಾರ ಮೊದಲಾದ ಅನೇಕ ವಿಶಿಷ್ಟ ಸಾಧಕರು ಇದರಲ್ಲಿ ಸೇರಿರುವುದು ವಿಶೇಷವಾಗಿದೆ. ಸಮಾಜದ ಎಲ್ಲಾ ಕ್ಷೇತ್ರಗಳಿಂದಲೂ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದ್ದು, ಅರ್ಜಿಯನ್ನು ಆಹ್ವಾನಿಸದೆ ಎಲೆಮರೆಯ ಕಾಯಿಯಂತೆ ಇರುವ ಅನೇಕ ಸಾಧಕರನ್ನು ಈ ಸಲ ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಸನ್ಮಾನವು ಮೂರೂ ದಿನವು ನಡೆಯಲಿದ್ದು ಎಲ್ಲಾ ಸನ್ಮಾನಿತರ ಸಾಧನೆಗೆ ಮಹತ್ವ ದೊರಕಲಿದೆ.

ಆಹ್ವಾನ ಪತ್ರಿಕೆಯನ್ನು ರೂಪಿಸುವಲ್ಲಿ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸನ್ಮಾನಿತರನ್ನು ಆಯ್ಕೆ ಮಾಡುವಲ್ಲಿ ಹದಿನಾಲ್ಕು ಜನರ ಗಣ್ಯರ ಆಯ್ಕೆ ಸಮಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದ್ದು ಈ ಸಮಿತಿಯು ಹಲವು ಸಭೆಗಳನ್ನು ನಡೆಸಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಪ್ರತಿಭಾ ನ್ಯಾಯಕ್ಕೆ ಮಹತ್ವ ನೀಡಿ ಪಾರದರ್ಶಕವಾಗಿ ಆಯ್ಕೆಯನ್ನು ಮಾಡಲಾಗಿದೆ. ಕಳೆದ ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶವನ್ನು ಪಡೆದವರನ್ನು ಹೊರತು ಪಡಿಸಿ ಸಮ್ಮೇಳನದಲ್ಲಿ ಇದುವರೆಗೂ ಅವಕಾಶವನ್ನು ಪಡೆಯದ ಎಲೆ ಮರೆಯ ಕಾಯಿಯಂತಿರುವ ಪ್ರತಿಭಾವಂತರಿಗೆ ಅವಕಾಶವನ್ನು ನೀಡಲು ಪ್ರಯತ್ನಿಸಲಾಗಿದೆ, ಇಲ್ಲಿಯೂ ಕೂಡ ಯುವ ಪ್ರತಿಭೆಗಳಿಗೆ ಮಹತ್ವವನ್ನು ನೀಡಲಾಗಿದೆ.

ಇದು ಏಕ ವ್ಯಕ್ತಿಯ ಆಯ್ಕೆಯಲ್ಲದೆ ಸಮಾಜದ ಎಲ್ಲಾ ಸ್ತರಗಳಿಂದ ಬಂದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸನ್ಮಾನಿತರನ್ನು ಆಯ್ಕೆ ಮಾಡುವ ಸಮಿತಿಯ ಗಣ್ಯರು ಮಾಡಿದ ಪ್ರಜಾಸತ್ತಾತ್ಮಕವಾದ ಆಯ್ಕೆಯಾಗಿದೆ ಎನ್ನುವುದು ಗಮನಾರ್ಹ.

ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಆರೋಪವು ಕೇಳಿ ಬಂದಿರುವುದನ್ನು ಪ್ರಸ್ತಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಾವುದೇ ಜಾತಿ, ಧರ್ಮ ಅಥವಾ ಸಿದ್ಧಾಂತಕ್ಕೆ ಸೀಮಿತವಾದದಲ್ಲ. ಇಲ್ಲಿರುವುದು ಕನ್ನಡ ಜಾತಿ ಮತ್ತು ಕನ್ನಡ ಧರ್ಮ ಮಾತ್ರ. ಜಾತಿ ಮತದ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಯನ್ನು  ವಿಶ್ಲೇಷಣೆ ಮಾಡುವುದೇ ಕನ್ನಡವನ್ನು ಸಾರ್ವಭೌಮವಾಗಿಸುವ ಉನ್ನತ ಆಶಯದಿಂದ ಶ್ರೀಮಾನ್ ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿದ ಕನ್ನಡ ಸಾಹಿತ್ಯ ಪರಂಪರೆಗೆ ಮಾಡುವ ಅವಮಾನ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಎಡ ಪಂಥ, ಬಲ ಪಂಥ, ಮೇಲ್ಪಂಥ, ಕೆಳ ಪಂಥ, ಮಧ್ಯ ಪಂಥ ಹೀಗೆ ಯಾವ ಚೌಕಟ್ಟಿಗೂ ಸಿಲುಕುವಂತಹದಲ್ಲ. ಇದು ‘ಕನ್ನಡ ಪಂಥ’ಕ್ಕೆ ಸೇರಿದ್ದು ಇಲ್ಲಿ ಅತಿ ಹೆಚ್ಚಿನ ಮಹತ್ವವಿರುವುದು ಕನ್ನಡ ನಾಡು-ನುಡಿ-ಕನ್ನಡಿಗರಿಗೆ. ಕನ್ನಡಿಗ ಎನ್ನುವುದೊಂದೇ ಆಯ್ಕೆಯಲ್ಲಿ ಬಳಸಿದ ಮಾನದಂಡ ಎಂದು ಅವರ ಸ್ಪಷ್ಟ ಪಡಿಸಿದ್ದಾರೆ.

Publisher: ಕಸಾಪ | ಕನ್ನಡ ಸಾಹಿತ್ಯ ಪರಿಷತ್ತು

Comments0 Comments

Be the first one to comment..

Login to Give your comment
Powered by